ಕ್ಯಾಸೊವರಿ	

ಕ್ಯಾಜ್ಯುóಯಾರೈಯಿಫಾರ್ಮೀಸ್ ಗಣದ ಕ್ಯಾಸ್ಯುಯರೈಯಿಡೀ ಕುಟುಂಬಕ್ಕೆ ಸೇರಿದ ಕ್ಯಾಸ್ಯುಯೇರಿಯಸ್ ಎಂಬ ಜಾತಿಗೆ ಸೇರಿದ 3 ಪ್ರಭೇದಗಳ ಹಕ್ಕಿಗಳಿಗಿರುವ ಸಾಮಾನ್ಯ ಹೆಸರು. ಈಮ್ಯೂ ಹಕ್ಕಿಗೆ ಬಲು ಹತ್ತಿರದ ಸಂಬಂಧಿ. ಅದರಂತೆಯೇ ಇದು ಕೂಡ ಹಾರಲಾಗದ ಹಕ್ಕಿ. ಆಸ್ಟ್ರೇಲಿಯದ ಈಶಾನ್ಯ ಭಾಗದಲ್ಲಿ ಕ್ಯಾಸ್ಯುಯೇರಿಯಸ್ ಎಂಬ ಪ್ರಭೇದವೂ ಜೋಬಿ ದ್ವೀಪದಲ್ಲಿ ಬೆನೆಟಿಯೈ ಎಂಬುದೂ ಜೋಬಿ ಹಾಗೂ ಸಲಾವತಿ ದ್ವೀಪಗಳಲ್ಲಿ ಅನಪೆಂಡಿಕ್ಯುಲೇಟಸ್ ಎಂಬುದೂ ಕಾಣಸಿಕ್ಕುತ್ತವೆ. ನ್ಯೂ ಗಿನಿಯಲ್ಲಿ ಮೂರು ಪ್ರಭೇದಗಳೂ ಇವೆ. ದಟ್ಟವಾದ ಕಾಡುಗಳಲ್ಲಿ ವಾಸಿಸುತ್ತವೆ. ಕ್ಯಾಸೊವರಿ ನೋಡಲು ಹೆಚ್ಚು ಕಡಿಮೆ ಈಮ್ಯೂ ಹಕ್ಕಿಯಂತೆಯೇ ಇದೆ. ಆದರೆ ಗಾತ್ರದಲ್ಲಿ ಅದಕ್ಕಿಂತ ಚಿಕ್ಕದು; ಪೂರ್ಣ ಬೆಳೆದ ಗಂಡು ಕ್ಯಾಸೊವರಿ ಸುಮಾರು 5' ಎತ್ತರ ಇದೆ. ಸ್ಥೂಲವಾದ ದೇಹ, ದೇಹದ ಗಾತ್ರಕ್ಕೆ ಹೋಲಿಸಿದರೆ ಚಿಕ್ಕವಾಗಿ ಕಾಣುವ ದೃಢವಾದ ಕಾಲುಗಳು, ಉದ್ದವಾಗಿ ದೇಹದಿಂದ ಇಳಿಬಿದ್ದಿರುವ ಮತ್ತು ಕೂದಲಿನಂತೆ ಕಾಣಬರುವ ಪುಕ್ಕಗಳು, ಕ್ಷೀಣವಾಗಿರುವ ರೆಕ್ಕೆಗಳು ನೆತ್ತಿಯ ಮೇಲಿರುವ ಕೊಂಬಿನ ಕಿರೀಟದಂಥ ರಚನೆ, ಕತ್ತಿನಿಂದ ಮತ್ತು ತಲೆಯ ಎರಡು ಪಕ್ಕಗಳಿಂದ ಇಳಿಬಿದ್ದಿರುವ ಕೆಂಪುಬಣ್ಣದ ಮಾಂಸಲ ಭಾಗ (ವ್ಯಾಟಲ್), ಇವು ಕ್ಯಾಸೊವರಿಯ ಪ್ರಮುಖ ಲಕ್ಷಣಗಳು. ರೆಕ್ಕೆಗಳ ತುದಿಯಲ್ಲಿ ಉದ್ದವಾದ ತಂತಿಗಳಂಥ 3-5 ಗರಿಗಳಿವೆ. ದಟ್ಟವಾದ ಪೊದೆಗಳಲ್ಲಿ ನುಗ್ಗಿ ಸಾಗುವಾಗ ಮತ್ತು ತನ್ನದೇಹದ ರಕ್ಷಣೆಗಾಗಿ ಇವನ್ನು ಬಳಸಿಕೊಳ್ಳುತ್ತದೆ. ದೇಹದ ಬಣ್ಣ ಕಪ್ಪು. ಮರಿಗಳ ದೇಹ ಮಾತ್ರ ಕಂದುಬಣ್ಣಕ್ಕಿದೆ. ಕ್ಯಾಸೊವರಿಯಲ್ಲಿ ಕಾಣಬರುವ ಸೋಜಿಗದ ಸಂಗತಿಯೆಂದರೆ ಹೆಣ್ಣುಹಕ್ಕಿ ಗಂಡಿಗಿಂತ ದೊಡ್ಡದಿರುವುದು. ಕಾಲುಗಳಲ್ಲಿ 3 ಬೆರಳುಗಳಿವೆ. ಅತ್ಯಂತ ಒಳಗಿನ ಬೆರಳಿನಲ್ಲಿ ಬಹುಹರಿತವಾದ ನಖವಿದೆ. ಶತ್ರುಗಳಿಂದ ಆವೃತವಾದಾಗ ಇದನ್ನು ಪರಿಣಾಮಕಾರಿಯಾದ ಆಯುಧವಾಗಿ ಉಪಯೋಗಿಸಬಲ್ಲುದು.

ಕ್ಯಾಸೊವರಿಗಳು ಸಣ್ಣ ಗುಂಪುಗಳಲ್ಲಿ ವಾಸಿಸುತ್ತವೆ. ತುಂಬ ಎಚ್ಚರಿಕೆಯಿಂದ ಶತ್ರುಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಓಡಾಡುತ್ತವೆ. ಶತ್ರುಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಓಡಾಡುತ್ತವೆ. ಶತ್ರುಪ್ರಾಣಿಗಳಾಗಲಿ ಮನುಷ್ಯನಾಗಲಿ ಆಕ್ರಮಿಸಿದಾಗ ಸಾಮಾನ್ಯವಾಗಿ ಓಡಲು ಹವಣಿಸುತ್ತವೆ. ಇವಕ್ಕೆ ಹಾರಲಾಗದಿದ್ದರೂ ವೇಗವಾಗಿ ಓಡುವ ಸಾಮಥ್ರ್ಯವಿದೆ. ಗಂಟೆಗೆ 40 ಮೈಲಿಗಳ ವೇಗದಲ್ಲಿ ಓಡಬಲ್ಲುವು. ಅಲ್ಲದೆ ದಾರಿಯಲ್ಲಿ ಅಡಚಣೆಗಳು ಸಿಕ್ಕಿದರೆ ಸುಮಾರು 6' ಎತ್ತರಕ್ಕೂ ನೆಗೆದು ದಾಟಬಲ್ಲುವು. ನೀರು ಸಿಕ್ಕಿದರೂ ಅಷ್ಟೆ, ಸರಾಗವಾಗಿ ಈಸಿ ದಾಟುತ್ತವೆ. ನೀರು ಕಂಡರೆ ಕ್ಯಾಸೊವರಿಗಳಿಗೆ ಇಷ್ಟವೆ. ಸಮುದ್ರದಲ್ಲೂ ಈಸುತ್ತ ಕಾಲಕಳೆಯುತ್ತವೆ ಎಂದು ಹೇಳಲಾಗಿದೆ. ತುಂಬ ನಾಚಿಕೆ ಸ್ವಭಾವದ ಈ ಹಕ್ಕಿಗಳು ತಮ್ಮ ಆಹಾರಾನ್ವೇಷಣೆಗೆ ಬೆಳಗಿನ ಜಾವ ಮತ್ತು ಸಂಜೆ ಮಾತ್ರ ಹೊರಡುತ್ತವೆ. ವಿವಿಧ ಬಗೆಯ ಹಣ್ಣುಗಳು, ಕೀಟಗಳು ಇವೇ ಇವುಗಳ ಪ್ರಧಾನ ಆಹಾರ. ಕೆಲವು ಬಾರಿ ಸಣ್ಣ ಗಾತ್ರದ ಪ್ರಾಣಿಗಳನ್ನು ತಿನ್ನುವುದೂ ಉಂಟು.

ಕ್ಯಾಸೊವರಿ ದಟ್ಟವಾದ ಪೊದೆಗಳ ನಡುವೆ ನೆಲದ ಮೇಲೆ ಕಡ್ಡಿ ಎಲೆ ಮುಂತಾದುವನ್ನು ಉಪಯೋಗಿಸಿ ಗೂಡು ಕಟ್ಟುತ್ತದೆ. ಹೆಣ್ಣು 3-6 ನಸು ಹಸಿರು ಬಣ್ಣದ ಮೊಟ್ಟೆಗಳನ್ನಿಟ್ಟ ಬಳಿಕ ಗಂಡು ಕಾವು ಕೊಡಲು ಆರಂಭಿಸುತ್ತದೆ. ಕಾವು ಕೊಡುವ ಕಾಲ ಸುಮಾರು 7 ವಾರಗಳು. ಮೊಟ್ಟೆಯೊಡೆದು ಬರುವ ಮರಿಗಳ ಪಾಲಿನ ಹೊಣೆಯೂ ಗಂಡಿನದೆ. ಮೊಟ್ಟೆಯಿಡುವ ಕಾಲದಲ್ಲಿ ಮಾತ್ರ ಹೆಣ್ಣು ಗುಂಪಿನಿಂದ ಬೇರೆಯಾಗುತ್ತದೆ. ಮರಿಗಳ ಮೈಮೇಲೆ ಬೂದಿಬಣ್ಣದ ಪಟ್ಟೆಗಳಿರುತ್ತವೆ. 
ಪಾಪುವ ದ್ವೀಪದ ಮೂಲವಾಸಿಗಳು ಕ್ಯಾಸೊವರಿಯನ್ನು ಅಚ್ಚುಮೆಚ್ಚಿನ ಆಹಾರವಾಗಿ ಬಳಸುತ್ತಾರೆ. 														(ಜಿ.ಎಂ.ಬಿ.)
										(ಪರಿಷ್ಕರಣೆ : ಕೆ ಎಸ್ ನವೀನ್)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ